ಅಂಬೇಡ್ಕರ್ ಜಯಂತಿ

ಅಂಬೇಡ್ಕರ್ ಜಯಂತಿ :-

ಅಂಬೇಡ್ಕರ್ ಜಯಂತಿಯ ಆಚರಣೆಯಲ್ಲಿ ಎಷ್ಟು ವಿಧಗಳಿವೆ? ಅವು ಯಾವುವು?
ಅಂಬೇಡ್ಕರ್ ಜಯಂತಿ ಆಚರಣೆಯಲ್ಲಿ ಐದು ವಿಧಗಳಿವೆ. ಅವು ಯಾವುವೆಂದರೆ:- 
೧. ವಂತಿಗೆ ಪಡೆದು ಕೇರಿಯಲ್ಲಿ ಮೆರವಣಿಗೆ ಮಾಡಿ , ಊಟ ಹಂಚಿ, ಪಟಾಕಿ ಸಿಡಿಸಿ ನರ್ತಿಸುವುದು.
೨. ಬಾಬಾಸಾಹೇಬರ ಉಕ್ತಿಗಳನ್ನು ಸಂಗ್ರಹಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚುವುದು.
೩. ಮನೆಯಲ್ಲಿ ಬಾಬಾಸಾಹೇಬರ ಫೋಟೋ ಇಟ್ಟು ಹೂ ಹಣ್ಣುಗಳನ್ನು ಇರಿಸಿ, ಸಿಹಿ ಪಾಯಸ ಮಾಡಿ, ಪೂಜೆ ಮಾಡಿ ಬುದ್ಧ ವಂದನಾ ಪಠಿಸಿ ಪ್ರಾರ್ಥಿಸುವುದು.
೪. ಗೆಳೆಯರೆಲ್ಲ ಕೂಡಿ ಸಾರ್ವಜನಿಕ ಸಭೆ ಮಾಡಿ, ಮಾಂಸದ ಊಟ ತಿಂದು, ಮದ್ಯ ಕುಡಿದು, ಮನೆಯಲ್ಲಿ ಮಲಗುವುದು. 
೫. ಅಂಬೇಡ್ಕರರ ಪುಸ್ತಕಗಳನ್ನು ಓದಿರುವವರನ್ನು ಕರೆಸಿ ಏಳು ದಿನ, ಒಂದೊಂದು ದಿನ ಬಾಬಾಸಾಹೇಬರ ಒಂದೊಂದು ಪುಸ್ತಕದ ಬಗೆಗೆ ಒಬ್ಬೊಬ್ಬರಿಂದ ಭಾಷಣ ಮಾಡಿಸುವುದು. 

ನನಗೆ ತಿಳಿದ ಮಟ್ಟಿಗೆ ಮಾತನಾಡುವುದಾದರೆ ಪ್ರಸ್ತುತ ಅಂಬೇಡ್ಕರ್ ಅನುಯಾಯಿಗಳೆಂದು ಹೇಳಿಕೊಳ್ಳುವವರು ಮೇಲಿನ ಈ ಐದು ವಿಧದಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸುತ್ತಿದ್ದಾರೆ. ಇವುಗಳಲ್ಲಿ ಯಾವುದು ಪ್ರಯೋಜನಕಾರಿ ಮತ್ತು ಯಾವುದು ಅಪ್ರಯೋಜನಕಾರಿ ಎಂದು ಚರ್ಚಿಸಿ ಅರ್ಥ ಮಾಡಿಕೊಳ್ಳಬೇಕಾದ ಸಂದರ್ಭ ಬಂದಿದೆ. 

ಮೊದಲನೆಯದು, ಯಾರೋ ಕೆಲವರ ಬಳಿ ಹೆಚ್ಚಾಗಿ ಹಣ ಇರುವವರಿಂದ ದೇಣಿಗೆ ಪಡೆದು ಅದ್ದೂರಿಯಾಗಿ ಶಾಮಿಯಾನ ಪ್ಲೆಕ್ಸ್ ಹಾಕಿಸಿ ಕೇರಿಯಲ್ಲಿ ಮೆರವಣಿಗೆ ಮಾಡಿ, ಪಟಾಕಿ ಸಿಡಿಸಿ, ಪಲಾವ್ ಪುಳಿಯೋಗರೆ ತಿಂದು ಮನೆಗೆ ತೆರಳುವುದು. ಇದರಿಂದ ಕೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಿಸುತ್ತಾರೆಂಬ ವಿಷಯ ಎಲ್ಲರಿಗೂ ತಿಳಿಯುತ್ತದೆ. ಯುವಕರು ಯಾರದೋ ದುಡ್ಡಿನಲ್ಲಿ ..... ಜಾತ್ರೆ ಮಾಡುವ ಬಗ್ಗೆ ಒಳ್ಳೆಯ ತರಬೇತಿ ಕೊಟ್ಟಂತಾಗುತ್ತದೆ. ಬೇರೇನೂ ಪ್ರಯೋಜನವಿಲ್ಲ. 

ಎರಡನೆಯ ರೀತಿಯ ಆಚರಣೆಯಿಂದ ಹೆಚ್ಚಿನ ಪ್ರಯೋಜನವಿಲ್ಲ. ಬಾಬಾಸಾಹೇಬರ ಜೀವನ ಚರಿತ್ರೆ ಮತ್ತು ಕೃತಿಗಳನ್ನು ಓದಿ ತಿಳಿಯದೆ ಕೇವಲ ಉಕ್ತಿಗಳಿಂದ ಅವರ ಸಾಧನೆಯನ್ನು ಅಳೆಯಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಓದಿಕೊಂಡು ಜನ ಅವನ್ನು ಮರೆಯುತ್ತಾರೆ. ಜಾಲತಾಣದಲ್ಲಿ ಹಾಕಿದವರಿಗೆ ಸಮಾಧಾನ ಸಿಗಬಹುದು ಆದರೆ ಓದಿದವರಿಗೆ ಪ್ರಯೋಜನವಿಲ್ಲ. ಅವರಿಗೆ ಜ್ಞಾನವೂ ಸಿಗದು, ಸಮಾಧಾನವೂ ಸಿಗದು. 

ಮೂರನೆಯ ರೀತಿಯ ಆಚರಣೆಯಿಂದ ಒಂದು ಕುಟುಂಬದ ಸದಸ್ಯರೆಲ್ಲರೂ ಪೂಜಿಸಿ, ಪ್ರಾರ್ಥಿಸುವುದರಿಂದ ಇಡೀ ಕುಟುಂಬದ ಎಲ್ಲ ಸದಸ್ಯರು ಭಾಗವಹಿಸುವುದರಿಂದ ಆ ಕುಟುಂಬ ಬಾಬಾಸಾಹೇಬರ ಸಧೃಡ ಅನುಯಾಯಿಯಾಗುತ್ತದೆ. ಹೆಂಗಸರು ಮಕ್ಕಳಾದಿಯಾಗಿ ಎಲ್ಲರೂ ಬಾಬಾಸಾಹೇಬರ ಗಟ್ಟಿ ಅನುಯಾಯಿಗಳಾಗುತ್ತಾರೆ. ಬಾಬಾಸಾಹೇಬರ ಬಗೆಗೆ ತಿಳಿಯಬೇಕು ಹಾಗೂ ಅವರ ಸಂದೇಶ ಪಾಲಿಸಬೇಕೆಂಬ ಹಂಬಲ ಮಕ್ಕಳಲ್ಲಿ ಬೆಳೆಯುತ್ತದೆ. ಕುಟುಂಬದ ಎಲ್ಲರೂ ಪಾಲ್ಗೊಳ್ಳುವುದರಿಂದ ಹಬ್ಬದ ವಾತಾವರಣ ಮತ್ತು ಸಂತೋಷ ಮನೆಮಾಡುತ್ತದೆ. 

ನಾಲ್ಕನೆಯ ಮಾದರಿಯು ಸರ್ಕಾರಿ ದಿನಾಚರಣೆಗಳಂತೆ ಕಾಟಾಚಾರಕ್ಕೆ ಆಚರಿಸಿ, ಕುಡಿದು ತಿಂದು ಮೋಜು ಮಾಡಲು ಒಂದು ನೆಪವಾಗುತ್ತದೆ ಮತ್ತು ಹಣವು ವ್ಯರ್ಥವಾಗುತ್ತದೆ. 

ಐದನೆಯದು, ಬಾಬಾಸಾಹೇಬರು ಬರೆದ ಪುಸ್ತಕಗಳ ಬಗೆಗೆ ಅರಿತವರಿಂದ ಭಾಷಣ ಏರ್ಪಡಿಸುವುದರಿಂದ ಬಾಬಾಸಾಹೇಬರ ಚಿಂತನೆಗಳನ್ನು ಅರಿತು ಮುಂದಿನ ಚಳುವಳಿಗಳನ್ನು ರೂಪಿಸುವ ಕ್ರಾಂತಿಕಾರಿಗಳನ್ನು ಹುಟ್ಟು ಹಾಕುವ ಪ್ರಯತ್ನ ಇದಾಗುತ್ತದೆ. ಇದು ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಇದರಿಂದ ಅಸ್ಪೃಶ್ಯರ ನಿಜವಾದ ವಿಮೋಚನೆ ಸಾಧ್ಯ. ಇದರಿಂದ ಉತ್ತಮವಾದ ನಾಯಕರು ಉದಯಿಸುತ್ತಾರೆ. ಇಂತಹ ಕಾರ್ಯಕ್ರಮಗಳು ಮಹಾರಾಷ್ಟ್ರದಲ್ಲಿ ಏಪ್ರಿಲ್ ಹದಿಮೂರರಿಂದ ಏಪ್ರಿಲ್ ಇಪ್ಪತ್ತರವರೆಗೆ ಚಾಲನೆಯಲ್ಲಿರುತ್ತವೆ.

ಈ ಐದು ವಿಧಗಳಲ್ಲಿ ನಮ್ಮ ಬೌದ್ಧಿಕ ಮಟ್ಟಕ್ಕೆ ಯಾವುದು ಸೂಕ್ತವೋ ಅದನ್ನು ಆಯ್ದುಕೊಂಡು ಮುಂದಿನ ಪೀಳಿಗೆಗೆ ಮಾರ್ಗ ತೋರಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ.

ಜೈ ಭೀಮ್

                               _______ o ________

Comments

Popular posts from this blog

Last speech delivered by Dr Ambedkar in constituent assembly on 25th November 1949.

Kalama Sutta : The charter of free inquiry